Tuesday, March 18, 2008

ಯಕ್ಷಗಾನ ಎಲ್ಲಿಂದ ಹೇಗೆ ಬೆಳೆದು ಬಂತು - ಒಂದು ವಿಚಾರ






ಡಾ. ಸುನೀತಾ ಶೆಟ್ಟಿ






ಯಕ್ಷಗಾನ ಆಟವೆಂಬುದು ಯಾವ ಕಾಲದಲ್ಲಿ ಪ್ರಸಿದ್ಧಿಗೆ ಬಂದಿತು, ಎಂಬ ಪ್ರಶ್ನೆಗೆ ನಿಖರವಾಗಿ ಕೊಡಬಹುದಾದ ಉತ್ತರವೆಂದರೆ ವಿಜಯ ನಗರದ ಅವಸಾನದ ನಂತರದಲ್ಲಿ. ಎಂದರೆ ಕ್ರಿ.ಶ. 1614ರಲ್ಲಿ ತಂಜಾವರದ ಅರಸು ಸಂಗೀತ ಪ್ರೇಮಿ ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನ ಪ್ರಬಂಧವೆಂಬ ಕೃತಿ ಯಕ್ಷಗಾನದಲ್ಲಿ ಭಾಗವತನೇ ಪ್ರಧಾನ. ವಿದ್ಯಾರಣ್ಯರ ಕಾಲದಲ್ಲೇ ಭಾಗವತ ವಾಙ್ಮಯವು ವಿಫುಲವಾಗಿ ಬೆಳೆದಿದ್ದು, ಇದರ ಒಂದು ಶಾಖೆಯಾಗಿ ದಾಸ ಸಾಹಿತ್ಯ ಪ್ರಚಲಿತಗೊಂಡು ವಿಷಯ ಸರ್ವವಿದಿತ. ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ. ಎಂದರೆ `ಯಕ್ಷಗಾನ ಆಟವೆಂಬುದು 15ನೇ ಶತಮಾನದಲ್ಲಿ ರೂಪುಗೊಂಡು 19ನೇ ಶತಮಾನದಲ್ಲಿ ಬೆಳೆದು 17ನೇ ಶತಮಾನದಲ್ಲಿ ಪೂರ್ಣ ಪರಿಣತಿ ಹೊಂದಿತು' ಎಂದು ಡಾ.ಭೀಮರಾವ್ ಚಿಟಗುಪ್ಪಿ ಬರೆದಿದ್ದಾರೆ. ಕನರ್ಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಈ ಕಲೆಯನ್ನು ಪೋಷಿಸಿದರು. ಯಕ್ಷಗಾನ ಕೃತಿಗಳನ್ನು ರಚಿಸಿದ ಪ್ರಮುಖ ಸಾಹಿತಿಗಳಲ್ಲಿ ನಮ್ಮ ಮುದ್ದಣನೂ ಒಬ್ಬ. ಈ ಯಕ್ಷಗಾನ ಭಕ್ತಿ ಸಂಪ್ರದಾಯದ ಅಂಗವಾಗಿ ಭಾರತದ ಇತರೆಡೆಗಳಿಗೂ ಹಬ್ಬಿದ್ದು, ಬರಿಯ ಒಣ ಅಭಿಮಾನದ ಸಂಗತಿಯಲ್ಲ. ಬಂಗಾಲದ ಯಾತ್ರಾ, ಅಸ್ಸಾಮದ ಆಂಖಯಾ, ತಮಿಳಿನ ತೆರಕೊಟ್ಟು. ಇವು ನಮ್ಮ ಯಕ್ಷಗಾನವನ್ನೇ ಹೋಲುತ್ತವೆ.
ಈ ಆಟವನ್ನು ಯಕ್ಷಗಾನ ಬಯಲಾವೆಂದು ಏಕೆ ಕರೆಯಲಾಯಿತು ಎಂಬುದಕ್ಕೆ ವಿದ್ವಾಂಸರು ಕೊಡುವ ಆಧಾರವೆಂದರೆ - ಹಿಂದೆ ಸಾರ್ವಜನಿಕ ಮನರಂಜನೆಯ ಕಾರ್ಯಕ್ರಮಗಳು ಬಯಲಿನಲ್ಲೇ ನಡೆಯುತ್ತಿದ್ದುದು. ಕ್ರಿ.ಪೂ.3ನೇ ಶತಮಾನದಲ್ಲಿ ಇದ್ದನು ಎನ್ನಲಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗ್ರಾಮಾಂತರಗಳಲ್ಲಿ ಖಾಯಂ ನಾಟ್ಯಶಾಲೆಗಳನ್ನು ಕಟ್ಟವುದಕ್ಕೆ ನಿಷೇಧವಿತ್ತು. ಅವನ ಕಾಲದಲ್ಲಿಯೂ ರಂಗೋಪಜೀವಿಗಳೆಂಬ ಮನರಂಜನೆಯ ತಂಡಗಳು ಊರೂರು ಸುತ್ತಿ ಪ್ರದರ್ಶನ ನೀಡುತ್ತಿದ್ದವು. ಈ ಪ್ರದರ್ಶನಗಳು ಹೊಲಗೆಲಸಗಳ ಕಾಲವನ್ನು ಬಿಟ್ಟು ನಡೆಯಬೇಕೆಂದು ಅವನ ಆಜ್ಞೆಯಾಗಿತ್ತು. ಮತ್ತು ಇದಕ್ಕೆ ಊರವರು ವಂತಿಗೆ ನೀಡಬೇಕಾಗಿತ್ತು. ಆದ್ದರಿಂದ ಈ ಪರಂಪರೆ ಹರಿದು ಬಂದು ಮನರಂಜನೆಯ ಆಟಗಳು ಬಯಲಿನಲ್ಲೇ ನಡೆಯುತ್ತಿದ್ದರಿಂದ ಅವು `ಬಯಲಾಟ' ಗಳಾದವು. `ನಾಟಕ' ಗಳಿಂದ ಬೇರ್ಪಡಿಸಿ ಹೇಳಲು ಈ ಪದ ಪ್ರಯೋಗ ರೂಢಿಯಲ್ಲಿ ಬಂದಿರಬಹುದು.
ಈಗ ಬಯಲಾಟಗಳಲ್ಲಿ ಬಹಳ ಅಪರೂಪವಾಗಿ ಕಾಣಸಿಗುವ `ಪೂರ್ವರಂಗ' (ಸಭಾಲಕ್ಷಣ-ಸಭಾವಂದನೆ)ಕ್ಕೆ ಕಲ್ಯಾಣದ ಪಶ್ಚಿಮ ಚಾಲುಕ್ಯ ದೊರೆ ಸೋಮೇಶ್ವರನ ಕಾಲವನ್ನು (ಕ್ರಿ.ಶ. 12ನೇ ಶತಮಾನ) ನಾವು ಗಮನಿಸಬೇಕು. ಈತ `ಕಲ್ಯಾಣಿ' ರಾಗದ ಕತರ್ೃ ಎನ್ನಲಾಗುತ್ತಿದೆ. `ಮಾನಸೋಲ್ಲಾಸ' ಈತನ ಗ್ರಂಥ. ಸಂಗೀತ ಈತನ ಪ್ರೀತಿಯ ವಿಷಯ. ವರಂಗಲ್ಲಿನ ಜಾಯಸೇನಾಪತಿ ಎಂಬವನು ಬರೆದಿದ್ದ ನೃತ್ಯ ರತ್ನಾವಳಿ ಗ್ರಂಥದಲ್ಲಿ ಬರುವ ಗೋಡಲಿ ನೃತ್ಯವನ್ನು ಸೋಮೇಶ್ವರನು ಪರಿಷ್ಕರಿಸಿ ತನ್ನ ಗ್ರಂಥದಲ್ಲಿ ಸೇರಿಸಿಕೊಂಡನಂತೆ. `ಗೋಂಡಲಿ' ಎಂದರೆ ಭಿಲ್ಲತಿಯರ ನೃತ್ಯ. ಇದರಲ್ಲಿ ಶುದ್ಧ ಮತ್ತು ಪೇರಣೆ ಎಂಬ ಎರಡು ವಿಭಾಗಗಳಿವೆ. ನಮ್ಮ ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಸ್ತ್ರೀ ವೇಷಗಳು ಮತ್ತು ಹಾಸ್ಯಗಾರ ಈ ಪಾತ್ರಗಳು ಗೋಂಡಲಿಯಿಂದ ಬಂದವುಗಳು ಎಂಬ ಅಭಿಪ್ರಾಯ ಪುಷ್ಠಿ ಪಡೆದಿದೆ. ಭಾಗವತ ಸಂಪ್ರದಾಯದಲ್ಲಿ ಕೃಷ್ಣ ಭಕ್ತಿಗೆ ಹೆಚ್ಚು ಪ್ರಾಶಸ್ತ್ಯವಿದ್ದುದರಿಂದ ಪೂರ್ವರಂಗದಲ್ಲಿ ಬಾಲ - ಗೋಪಾಲದ ನರ್ತನವೂ ಸೇರಿಕೊಂಡಿದೆ. ಸ್ಥಳೀಯವಾಗಿ ಸುಬ್ರಹ್ಮಣ್ಯನೂ ಬರುತ್ತಾನೆ. ಉತ್ತರ ಕನರ್ಾಟಕದಲ್ಲಿ ನಮ್ಮ ಈ ಸ್ಥಳೀಯ ದೇವತೆಗಳು ಕಾಣುವುದಿಲ್ಲ. ಇದರಲ್ಲಿ ಮುಖ್ಯವಾಗಿ ರಂಗಸ್ಥಳದ ಆಯ್ಕೆ, ರಂಗ ನಿಮರ್ಾಣ, ರಂಗಪೂಜೆ, ಗಣಪತಿ ಮತ್ತು ಇಷ್ಟದೇವತೆಗಳ ಪೂಜೆ, ಸಭಾಪತಿಯ ಲಕ್ಷಣ ಸಭಿಕರ ಲಕ್ಷಣ ಸೇರಿಕೊಳ್ಳುತ್ತವೆ. ಸ್ತ್ರೀ ವೇಷಗಳು, ಗೀತ - ವಾದ್ಯಗಳ ಹಿನ್ನೆಲೆಯೊಂದಿಗೆ ರಂಗಸ್ಥಳದ ಮಧ್ಯಕ್ಕೆ ಬಂದು ಪುಷ್ಪಾಂಜಲಿಯನ್ನು ಅಪರ್ಿಸುವುದು ಕ್ರಮ. ಶಾಙ್ರ್ಙದೇವನು ತನ್ನ `ರಸ ರತ್ನಾಕರ' ದಲ್ಲಿ ಇದನ್ನು ಉಲ್ಲೇಖಿಸಿದ್ದಲ್ಲದೆ ಈ ಪಾತ್ರಗಳು ತ್ರಿವಳಿ (ದೊಡ್ಡ ಆಕಾರದ ಡಮರು)ಯೊಂದಿಗೆ ಹಾಡುತ್ತಾ ನತರ್ಿಸುತ್ತಿದ್ದವು ಎಂದಿದ್ದಾನೆ. ಸ್ವಯಂಗಾಯತಿ ವಾದ್ಯಂಚ ತ್ರಿವಲೀಂ ವಾದಯೇತ್ ಸ್ವಯಂ ಎಂದು ಹೇಳಿ ಶೃಂಗಾರ ನರ್ತನವೆಂದೂ ಬಣ್ಣಿಸಿದ್ದಾನೆ. ಈಗಲೂ ಕನರ್ಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಗೋಂದೊಳು ನೃತ್ಯವು ಭವಾನಿಯನ್ನು ಎಂದರೆ ಶಕ್ತಿದೇವತೆಯನ್ನು ಪೂಜಿಸುವುದೇ ಆಗಿದೆ. ಈ ಸಂದರ್ಭದಲ್ಲಿ ಡಮರು ಎಂಬ ವಾದ್ಯವನ್ನು ನುಡಿಸಲಾಗುತ್ತದೆ. ನೃತ್ಯ ಮಾಡುವವರು ದೊಂದಿಗಳನ್ನು ಹಿಡಿದು ನತರ್ಿಸುವುದು ವಾಡಿಕೆ. ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿ ರಂಗಸ್ಥಳದ ಮುಂಭಾಗದಲ್ಲಿ ಎರಡು ದೊಂದಿಗಳನ್ನು ನಿಲ್ಲಿಸುವ ಪರಿಪಾಠವು ಈ ಗೋಂದಲಿಯಿಂದ ಬಂದುದು.
ಯಕ್ಷಗಾನ ಆಟದ ಪೂರ್ವರಂಗದಲ್ಲಿ ಕುಣಿಯುವ ಸ್ತ್ರೀ ಪಾತ್ರಗಳು `ಗೊಂದಲಿ' ನರ್ತಕಿಯರ ಪ್ರತಿನಿಧಿಗಳೆಂದು ತೋರುತ್ತದೆ. ಈ ನರ್ತಕಿಯರು ಸಭೆಯ ಗಣ್ಯ ವ್ಯಕ್ತಿಗಳಿಗೆ `ಸಲಾಮು' ಹಾಕುವ ಪದ್ಧತಿ ಇತ್ತು. ಆಗ ಅವರು `ದೌಲತ್ ಜ್ಯಾದಾ' (ಸಂಪತ್ತು ಹೆಚ್ಚಲಿ) ಎನ್ನುತ್ತಿದ್ದರು. ಆದರೆ ಇದು `ಜ್ಯಾದಾ' ಅಲ್ಲ `ತ್ಯಾಗ', `ಗೊಂಡಲಿ' ನರ್ತಕಿಯರು ಮಾಡುವ ಸ್ತುತಿ, ಎಂದು ಶಾಙ್ರ್ಙದೇವ ಹೇಳಿದ್ದಾನೆ. ಹೀಗೆ `ತ್ಯಾಗ' ಹೇಳಿದಾಗ ಅರಸನು ಅವರನ್ನು ಪುರಸ್ಕರಿಸಬೇಕು ಎಂಬ ನಿಯಮವಿತ್ತು.
`ಪೇರಣೆ'ಯಲ್ಲಿ ಹಾಸ್ಯಗಾರನೇ ಪ್ರಧಾನ. ಗೆಜ್ಜೆ ಕಟ್ಟಿದ ಆತನ ಹೆಜ್ಜೆಯಲ್ಲಿ ಐದು ಗತ್ತುಗಳಿರಬೇಕೆಂಬ ನಿಯಮವುಂಟು.
ಉತ್ತರ ಕನರ್ಾಟಕದ `ದೊಡ್ಡಾಟ' ಅಘವಾ `ಮೂಡಲಪಾಯ'ದಲ್ಲಿ ಹಾಸ್ಯಗಾರನಿಗೇ ಪ್ರಮುಖ ಸ್ಥಾನ. `ಜಾನಪದದಲ್ಲಿ ಹುಟ್ಟಿ ಅರಳಿ, ಅಭಿಜಾತದತ್ತ ಮುಖ ಮಾಡಿದ ಯಕ್ಷಗಾನ, ಕುರಿತೋದಯಯುಂ ಕಾವ್ಯ ಪ್ರಯೋಗ ಮತಿಗಳಾದ ನಾಡವರ್ಗಳಿಗೆ ಅತಿ ಪ್ರಿಯವಾದ ಕಲೆಯಾಗಿದೆ' ಎಂದು ಡಾ. ಎನ್.ಆರ್. ನಾಯಕ ಬರೆಯುತ್ತಾರೆ. (ಉತ್ತರ ಕನ್ನಡ ಜಿಲ್ಲೆಯ ನಾಡವರ ಸಂಸ್ಕೃತಿ) ಹಿಂದಿನ ಕಾಲದಿಂದಲೂ ಪ್ರಚಲಿತವಿದ್ದುದನ್ನು ಹೇಳುವ ಅಲ್ಲಿಯ ಹಿರಿಯ ಕಲಾವಿದರೇ ತಮ್ಮ ಊರಿನ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರತಿ ಹಳ್ಳಿಯಲ್ಲಿಯೂ ಬಯಲಾಟ ಆಡಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮಾತ್ರವಲ್ಲ ತುಳುನಾಡಿನ `ಹಿರಿಯನ' ಶಿಷ್ಯರೆಂದು ಹೇಳಿಕೊಳ್ಳಲು ಅವರು ಹೆಮ್ಮ ಪಡುತ್ತಾರೆ' ಎಂದಿದ್ದಾರೆ. ನಾಡವರು ಮೇಳ ಕಟ್ಟಿದ್ದು ಕಡಿಮೆ. ಆದರೂ 1940ರ ಸುಮಾರಿಗೆ `ಸುಭೋದ ಯಕ್ಷಗಾನ ಮಂಡಳಿ'ಯನ್ನು ಕಟ್ಟಿ ಎಂಟು ಹತ್ತು- ವರ್ಷಗಳ ಕಾಲ ಅದನ್ನು ನಡೆಸಿ ಖ್ಯಾತಿ ಗಳಿಸಿದ್ದಲ್ಲದೆ ಇವರ ಮೇಳದಲ್ಲಿ ಶಾಂತಿ ದೇವಳಿ ಎಂಬ ಹೆಣ್ಣೊಬ್ಬಳು ಕಲಾವಿದೆಯಾಗಿ ಭಾಗವಹಿಸಿದ್ದರ ಉಲ್ಲೇಖವನ್ನು ನಾಯಕರು ಮಾಡಿದ್ದಾರೆ. ಅವರು ಹೇಳುವಂತೆ ಈಕೆ ಯಕ್ಷಗಾನದಲ್ಲಿ ಭಾಗವಹಿಸಿದ ಪ್ರಥಮ ಮಹಿಳೆ. ಇದು ಗಮನಾರ್ಹ ಸಂಗತಿ.
ನಾಡವರಿರುವ ಪ್ರತಿ ಹಳ್ಳಿಯಲ್ಲಿಯೂ `ತಾಲಮದ್ದಲೆ' ಯೂ ನಡೆಯುತ್ತದೆ. ಇದಕ್ಕೆ ಅವರು `ಓದಿಕೆ' `ಓದ್ಕೆ' ಎನ್ನುತ್ತಾರೆ. ಭಾಗವತನು ಪ್ರಸಂಗವನ್ನು ಓದಿ ಹಾಡುವುದರಿಂದ ಬಹುಶಃ ಈ ಹೆಸರು ಬಂದಿರಬೇಕು. ಶ್ರೀ ಎಂ.ಎಂ.ನಾಯಕ ಎಂಬವರು ಸಂಗ್ಯಾ -ಬಾಳ್ಯಾ ಸಣ್ಣಾಟವನ್ನು ಯಕ್ಷಗಾನ ಪ್ರಸಂಗರೂಪದಲ್ಲಿ ಬರೆದವರೆಂದು ಖ್ಯಾತರಾಗಿದ್ದರು. ನಾಡು ಮಾಸ್ಕೇರಿಯ ತಿಮ್ಮಣ್ಣ ಗಾಂವಕರು ಹೆಣ್ಣು ಮಕ್ಕಳ ಯಕ್ಷಗಾನವನ್ನು ಸಂಘಟಿಸಿದವರಲ್ಲಿ ಮೊದಲಿಗರು.
ನಮ್ಮಲ್ಲಿ ನರ್ತನದ ಪೂರ್ವರಂಗವನ್ನು ಕಥಾತ್ಮಕವೆನಿಸುವ ತಮ್ಮ ಪ್ರಬಂಧಗಳಿಗೆ ಜೋಡಿಸಿ, ದಾಸಕೂಟವು ಇಂದಿನ ಯಕ್ಷಗಾನವನ್ನು ರೂಪಿಸಿರಬೇಕು ಎಂಬ ಹೇಳಿಕೆ ಕೂಡ ಒಪ್ಪುವಂತಹುದು. ಯಕ್ಷಗಾನ ಆಟಕ್ಕೆ ಶಾಸ್ತ್ರೀಯ ರೂಪಕೊಟ್ಟು ಅದನ್ನು ಲೋಕಪ್ರಿಯವನ್ನಾಗಿ ಮಾಡಿದವರು ಸಂಗೀತತಜ್ಞರಾದ ಪುಂಡರೀಕ ವಿಠ್ಠಲ ಮತ್ತು ಸಂಗೀತ ದರ್ಪಣಕಾರ ಚತುರ ದಾಮೋದರ. ಉಳಿದ ಸಂಗೀತದಲ್ಲಿ ರಾಗಾಶ್ರಯವಿದ್ದರೆ, ಯಕ್ಷಗಾನವು ತಾಳ ಮತ್ತು ಭಾವ ಪ್ರಧಾನವಾದುದು. ಬರ ಬರುತ್ತಾ ಸಂಸ್ಕೃತ ನಾಟಕದ ಲಕ್ಷಣಗಳು ಇದರಲ್ಲಿ ಸೇರಿಕೊಂಡಾಗ ಸ್ವರೂಪ ಬದಲಾದುದು ನಿಜ. ಆದರೂ ಗ್ರಾಮೀಣರು ತಮಗೆ ಸರಿ ಕಂಡ ರೀತಿಯಲ್ಲಿ ಪರಂಪರೆಯನ್ನು ಉಲ್ಲಂಘಿಸದೆ ಇದನ್ನು ಪೋಷಿಸಿಕೊಂಡು ಬಂದರು. ಅದು ಜಾನಪದವೆನಿಸಿದ್ದು ಹೀಗೆ. ಆಗ ಈಗಿನಂತೆ ಸರಿಯಾದ ಮಾರ್ಗದರ್ಶನ ಇರಲಿಲ್ಲವೆಂಬುದೂ ನಿಜ.
ಕರಾವಳಿಯ ಯಕ್ಷಗಾನವು ಕೇರಳದ `ಕಥಕ್ಕಳಿ' ಯಿಂದ ಪ್ರಭಾವಿತಗೊಂಡುದೇ ಎಂಬ ಪ್ರಶ್ನೆ ಕೆಲವರನ್ನು ಕಾಡುವುದುಂಟು. ಆದರೆ ಇದು ಸರಿಯಲ್ಲ. ಕೇರಳದಲ್ಲಿ ಮೊದಲೇ `ಕೃಷ್ಣನಾಟ್ಯಂ' ಎಂಬುದು ಇದ್ದುದು ಇದೊಂದು ನಾಟ್ಯ ವಿಧಾನ ಮಾತ್ರ ಆಗಿತ್ತು. ಕೊಲ್ಲೂರು ಕ್ಷೇತ್ರಕ್ಕೆ ಆಗಾಗ ಬರುತ್ತಿದ್ದ ಕೇರಳದ ಕೊಟ್ಟಾರಕ ಮಹಾರಾಜನು ದಕ್ಷಿಣ ಕನ್ನಡದ ಯಕ್ಷಗಾನ ಬಯಲಾಟವನ್ನು ಕಂಡು, ಕೃಷ್ಣನಾಟ್ಯ ನೃತ್ಯಕ್ಕೆ ಹೊಸರೂಪಕೊಟ್ಟು `ಅಟ್ಟಕಥಾ' ಎಂಬುದನ್ನು ಪ್ರಚಾರಕ್ಕೆ ತಂದನಂತೆ. ಇದೇ `ರಾಮನಾಟ್ಟಂ'. ವಲ್ಲತ್ತೋಲ್ ನಾರಾಯಣ ಮೆನನ್ ಎಂಬುವರು ಇವುಗಳನ್ನು ಪರಿಷ್ಕರಿಸಿ ಅದಕ್ಕೆ ಕಥಕ್ಕಳಿ ಎಂದು ಹೆಸರುಕೊಟ್ಟರು. ಇದರಲ್ಲಿ ಮೊದಲು ಪಾತ್ರಧಾರಿಗಳು ಹಾಡುತ್ತಿದ್ದು ಆನಂತರ ಕನರ್ಾಟಕದ ಯಕ್ಷಗಾನದ ಪ್ರಭಾವದಿಂದಾಗಿ ಪ್ರತ್ಯೇಕ ಭಾಗವತರು ನೇಮಕಗೊಂಡರೆಂದು ಹೇಳಲಾಗುತ್ತದೆ. ನಮ್ಮ ಬಯಲಾಟದ ತಂತ್ರಗಾರಿಕೆ ಇದರಲ್ಲಿ ಇಲ್ಲ.
ಇನ್ನು ರಂಗಸ್ಥಳ ರಚನೆ, ಕಲಾವಿದರು ಬಳಿಸಿಕೊಳ್ಳುವ ರೀತಿ ಹಿಂದೆ ಈಗಿನಂತೆ ಇಲ್ಲಿಲ್ಲವೆಂದು ಯಕ್ಷಗಾನ ರಂಗತಜ್ಞ, ಸಂಶೋಧಕ ಡಾ. ರಾಘವ ನಂಬಿಯಾರ್ ಹೇಳುತ್ತಾರೆ. ಪರದೆಗಳಿಲ್ಲ. ದೀವಟಿಕೆಯ ಬೆಳಕು ಮಾತ್ರ. ಹಿಮ್ಮೆಳದ ಐವರು ಗೋಡೆಯಂತೆ ನಿಂತುಕೊಂಡೇ ಕಾರ್ಯನಿರ್ವಹಿಸುವುದು, ಈ ಗೋಡೆಯನ್ನು ಸೀಳಿಕೊಂಡೇ ವೇಷಗಳು ರಂಗಸ್ಥಳ ಪ್ರವೇಶಿಸುವುದು. ಬಡಗುತಿಟ್ಟಿನಲ್ಲಿ ಮಾತ್ರ ಚೆಂಡೆಯವನು ಕುಳಿತುಕೊಳ್ಳುವುದು. ಒಡ್ಡೋಲಗಕ್ಕಾಗಿ ಒಂದು ಮರದ ರಥವಿರುತ್ತಿತ್ತು. ಅದು ಬೇಕಾದಾಗ ಮಾತ್ರ ಮುಂದೆ ಸರಿಸಲ್ಪಡುವುದು.
ಬೇಟೆಯ ದೃಶ್ಯದಲ್ಲಿ ಕಿರಾತರು ಪ್ರವೇಶ ಮಾಡುವಾಗ ಹಿನ್ನೆಲೆಯ ಐದೂ ಮಂದಿ ಬದಿಗೆ ಸರಿದು ಸರಳ ರೇಖೆಯಲ್ಲಿ ನಿಲ್ಲುತ್ತಾರೆ. ಆಗ ಪ್ರೇಕ್ಷಕರಿಗೆ ರಂಗಸ್ಥಳದ ಹಿಂಬದಿಯಲ್ಲಿ ಏನು ನಡೆಯುತ್ತದೆ ಎಂಬುದೂ ಕಾಣುತ್ತದೆ. ಅಲ್ಲಿ ಬೈ ಹುಲ್ಲಿಗೆ ಬೆಂಕಿ ಕೊಟ್ಟು ಜ್ವಾಲೆ ಎಬ್ಬಿಸುತ್ತಾರೆ. ಅದಕ್ಕೆ ಪ್ರದಕ್ಷಿಣೆ ಬಂದು ಕಿರಾತರು ಒಬ್ಬೊಬ್ಬರೇ ಒಳ ಪ್ರವೇಶಸುತ್ತಾರೆ. ಈ ಹಿನ್ನೆಲೆಯಲ್ಲಿ ರಂಗಕ್ರಿಯೆ ಕೂಡಾ ಯಕ್ಷಗಾನವೊಂದು `ಟೋಟಲ್ ಥಿಯೇಟರ್' ಎಂಬುದಕ್ಕೆ ಸಾಕ್ಷಿ. ಉದಾ : ಜರಾಸಂಧನ ಭೇರಿಯನ್ನು ಭೀಮ ಬಾರಿಸುವುದು. ಹೀಗೆಯೇ ಚಕ್ರವ್ಯೂಹದೊಳಗೆ ಅಭಿಮನ್ಯು ಪ್ರವೇಶವನ್ನು ರಥಕ್ಕೆ ಏರುವುದರ ಮೂಲಕ ತೋರಿಸಲಾಗುತ್ತಿತ್ತು. ಬಿ.ವಿ.ಕಾರಂತರು ಒಮ್ಮೆ ತಮ್ಮ ಉಪನ್ಯಾಸದಲ್ಲಿ ಹೀಗೆ ಹೇಳಿದ್ದರಂತೆ - ರಂಗದಲ್ಲಿ ಬೆಳಕಿನ ಬಳಕೆ ಎಂದರೆ ನಾವು ಕತ್ತಲನ್ನು ಎಷ್ಟು ಉಪಯೋಗಿಸುತ್ತೇವೆ ಎನ್ನುವ ವಿವೇಕ. ಹಿಂದಿನ ಯಕ್ಷಗಾನ ಪ್ರದರ್ಶನಗಳು ಕತ್ತಲನ್ನು ಬಳಸಿಕೊಳ್ಳುತ್ತಿದ್ದ ರೀತಿ, ಈಗ ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿದುಕೊಂಡಿದೆ. ಕುಣಿದು ರಂಗ ಪ್ರವೇಶಿಸುವ ರೀತಿ ಮಾಯವಾಗಿ ಸಿಂಹಾಸನದಲ್ಲಿ ಕುಳಿತು ಒಡ್ಡೋಲಗ ನೀಡುವ ಪದ್ಧತಿ ಈಗ ಬಂದಿದೆ. ಓರ್ವಪಾತ್ರಧಾರಿ ಮಾತನಾಡುವಾಗ ಈಗಿನಂತೆ ಮತ್ತೊಬ್ಬ ಪಾತ್ರಧಾರಿ ಪ್ರತಿಕ್ರಿಯೆ ನೀಡುತ್ತಿದ್ದಿಲ್ಲ. ಏಕೆಂದರೆ ದೀವಟಿಗೆಯ ಮಂದ ಬಳಕಿನಿಂದ ಆತ ತೆರೆಮರೆಯ ಕತ್ತಲಲ್ಲಿ ಬೆನ್ನು ಹಾಕಿ ನಿಲ್ಲುತ್ತಿದ್ದ. ಆದರೆ ಈಗ ಸಭಾಗೃಹಗಳಲ್ಲಿ ಪ್ರದರ್ಶನ ಏರ್ಪಡಿಸುವಾಗ ಇವುಗಳನ್ನು ಪಾಲಿಸುವುದು ಸಾಧ್ಯವೂ ಇಲ್ಲ. ವಿದ್ಯುದ್ದೀಪಗಳ ಬೆಳಕೇ ಇಲ್ಲಿ ಮುಖ್ಯವಾಗುತ್ತದೆ. ರಂಗ ಪರಿಕರ, ಬಣ್ಣಗಾರಿಕೆ, ವೇಷ ಭೂಷಣ, ಅಭಿನಯಗಳಲ್ಲಿಯೂ ಬದಲಾವಣೆ ಇಲ್ಲಿ ಅನಿವಾರ್ಯವಾಗುತ್ತದೆ.
16ನೇ ಶತಮಾನದಿಂದಲೇ ಮಾತುಗಾರಿಕೆ ಪ್ರಧಾನವೆನಿಸುವ ತಾಮದ್ದಲೆ ಕೂಡಾ ಜನಪ್ರಿಯವಾಗುತ್ತ ಬಂದಿದೆ.
ದೊರೆತ ಯಕ್ಷಗಾನ ಕೃತಿಗಳಲ್ಲಿ ವಾರಂಬಳ್ಳಿ ವಿಷ್ಣು ವಿರಚಿತ ವಿರಾಟಪರ್ವ ಮೊದಲನೆಯದು (1564) ಜನತೆಯಲ್ಲಿ ಉತ್ತಮ ಸಂಸ್ಕಾರ ಮೂಡಿಸುವುದೇ ಪ್ರಸಂಗಗಳ ಉದ್ದೇಶ. ವೀರ - ಶೃಂಗಾರ ಪ್ರಧಾನರಸಗಳು. ಹಾಸ್ಯರಸವು ಹಾಸ್ಯಗಾರನ ಮಾತುಗಳಲ್ಲೇ ವ್ಯಕ್ತವಾಗಬೇಕೆಲ್ಲದೆ ಪದ್ಯಗಳಿಂದಲ್ಲ. ನಗಿರೆಯ ಸುಬ್ಬು ದೇವಿದಾಸ, ಧ್ವಜಪುರದ ನಾಗಪ್ಪಯ್ಯ ಹಾಗೆಯೇ ಎಂಟು ಕೃತಿಗಳನ್ನು ರಚಿಸಿದ ಕುಂಬಳೆ ಪಾತರ್ಿಸುಬ್ಬ ಮುಖ್ಯರಾಗುತ್ತಾರೆ. ಪಾತರ್ಿಸುಬ್ಬನದು ಸರಳ ಭಾಷೆ - ಅದನ್ನು ಗೊಂವಿಂದ ಪೈಯವರು `ಪಡಸಾಲೆಯಲ್ಲಿ ಕುಳಿತು ಪಟ್ಟಾಂಗ ಹೊಡೆಯುವ ಭಾಷೆ' ಎಂದಿದ್ದಾರೆ.
ಹಾಗೆಯೇ ಪೌರಾಣಿಕ ಕೃತಿಗಳಲ್ಲದೆ ಚಾರಿತ್ರಿಕ ವಿಷಯಕವಾದ ಪ್ರಸಂಗಗಳು ಬಂದಿವೆ. ವೀರಶೈವರು ಶಿವಭಕ್ತಿಗೆ ಪ್ರಾಶಸ್ತ್ಯ ಕೊಟ್ಟದ್ದರಿಂದ ಕರಿಭಂಟನಂತೆ, ಆದಿಪರಮೇಶ್ವರ ಪುರಾಣ ಇತ್ಯಾದಿಗಳು ಬಂದವು. ದ.ಕ.ಕ್ಕೆ ಈ ರೀತಿಯ ಪ್ರಸಂಗಗಳು ಕಾಲಿಟ್ಟದ್ದು ಬಹಳ ತಡವಾಗಿ ಒಟ್ಟಿನಲ್ಲಿ 18-19ನೇ ಶತಮಾನದ ಪ್ರವರ್ಧಮಾನದ ಕಾಲವೆನಿಸಿದೆ.
ವೇಷ ಭೂಷಣಗಳು ಬಣ್ಣಗಾರಿಕೆ, ಇವು ಆಯಾಯ ಪಾತ್ರ ಸ್ವಭಾವಕ್ಕೆ ಅನುಗುಣವಾಗಿ ಇರುತ್ತವೆ. ಧಿರಿಸುವ ಉಡುಪು ಕೂಡ ಸತ್ವ, ರಜ, ತಮೋ ಗುಣಗಳಿಗೆ ಅನುಗುಣವಾಗಿ ಪೀಠಿಕೆ ವೇಷಗಳಿಗೆ ಹಸುರು, ವಿರೋಧ ಪಾತ್ರಗಳಿಗೆ ಕಪ್ಪು, ಭೀಮನಿಗೆ ಕೆಂಪು, ಅಭಿಮನ್ಯುವಿಗೆ ಕಪ್ಪು, ಬಬ್ರುವಾಹನನಿಗೆ ಕೆಂಪು, (ಹನುಮಂತ, ಭೀಷ್ಮ, ದಶರಥ, ವರಾಹ, ನರಸಿಂಹ ಇಂಥವೇಷಗಳಿಗೆ ಬಿಳಿದಗಲೆ) ಬಣ್ಣಗಳನ್ನು ಒಳಗೊಂಡಿರುತ್ತದೆ. ಈಗ ಇದನ್ನು ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಹೇಳಲು ಬರುವುದಿಲ್ಲ. ಕಲಾವಿದರು ಅವರವರೇ ಮುಖವಣರ್ಿಕೆ ಬರೆದುಕೊಳ್ಳುತ್ತಾರೆ. ಇದು ಇಲ್ಲಿಯ ವೈಶಿಷ್ಟ್ಯ. ಕಥಕ್ಕಳಿಯಲ್ಲಿ ಬೇರೆಯವರು ಬಣ್ಣ ಹಾಕುತ್ತಾರೆ.
ಕುಣಿತದಲ್ಲಿ ಪುಂಡು ವೇಷದಲ್ಲಿ ಸಾಮಾನ್ಯವಾಗಿ ರಭಸದ ಕುಣಿತ. ಆದರೆ ಇದರಲ್ಲಿ ಪಾತ್ರ ವ್ಯತ್ಯಾಸಗಳನ್ನು ಗಮನಿಸದಿದ್ದಲ್ಲಿ ಅಭಿಮನ್ಯು ಎಷ್ಟು ದಿಗಿಣ ಹಾಕಿದನೋ ಅದಕ್ಕಿಂತ ಹೆಚ್ಚು ಬಬ್ರುವಾಹನ ಹಾಕುವುದು ನಾವು ನೋಡಿದ್ದೇವೆ. ಆದರೆ ಬಬ್ರುವಾಹನ ಮಣಿಪುರದ ಅರಸು, ಪುಂಡವೇಷವಾದರೂ ಅವನದು ರಾಜಗಾಂಭೀರ್ಯ. ಇದನ್ನು ಮರೆಯಬಾರದು. ಇದೇ ಔಚಿತ್ಯಭಂಗ, ವೇಷಭೂಷಣ, ಮುಖವಣರ್ಿಕೆಗಳಿಗೆ ಹೊಂದುವಂತಹ ಕುಣಿತ ಬೇಕು.
ತುಳು ಪ್ರಸಂಗಗಳು ಮತ್ತು ಪ್ರದರ್ಶನಗಳು :
ಕರಾವಳಿ ಕನರ್ಾಟಕದ ದಕ್ಷಿಣ ಭಾಗ ತುಳು ಭಾಷೆಯನ್ನಾಡುವ ವ್ಯಾಪಕತೆಯಿಂದಾಗಿ 1887ರಲ್ಲಿ ಪೆರುವಡಿ ಸಂಕಯ್ಯ ಭಾಗವತರು ವಿಟ್ಲದ ಅರಸನ ಆಶ್ರಯದಲ್ಲಿ ಪಾತರ್ಿಸುಬ್ಬನ ಪಂಚವಟಿ ಮತ್ತು ವಾಲಿ ಸುಗ್ರೀವ ಕಾಳಗವನ್ನು ತುಳು ಭಾಷೆಗೆ ಅನುವಾದ ಮಾಡಿದ್ದಾತ. ಅವನ ಪ್ರತಿಭೆಗೆ ಸ್ವಂತಿಕೆಗೆ ಒಂದು ನಿದರ್ಶನವೆಂದರೆ ಕನ್ನಡ ಪಂಚವಟಿಯ 225 ಪದ್ಯಗಳನ್ನು 361 ಪದ್ಯಗಳಾಗಿ ಬೆಳೆಸಿದ್ದು. ಸೊಗಸಾದ ಶೈಲಿಗೆ ಒಂದು ಉದಾ :
`"ನೋಡಿದನು ಮುರಿದವನನು ಅಲ್ಲಾಡಿದನು, ತುದಿಬೆರಳನಹುದೈ
ಖೋಡಿ ಇಲ್ಲದ ಖರೆಯನಹೆ ಖದ್ಯೋತವಂಶದಲಿ'
"ತೂಯೆ ಪಿಜಿರ್ತ್ ಕೊಡಿ ಬೆರೆಲ್ ನಾಡಾಯೆ ಭೂಮಿಟ್ ಕೊರತೆ ಇದ್ಯಾಂ
ತ್ಯಾಯೆ ಸೂರ್ಯವಂಶದ ಅರಸುಗುಳೆ ಕುಲೊಟು"
16ನೇ ಶತಮಾನದಲ್ಲಿ ಇಂಥದ್ದೊಂದು ಪ್ರಯತ್ನ ನಡೆದಿರುವುದೇ ತುಳು ಭಾಷೆಯ ಮಟ್ಟಿಗೆ ಅಭಿಮಾನದ ಸಂಗತಿ. ಅನಂತರ 20 ನೇ ಶತಮಾನದ ಪೂವರ್ಾರ್ಧದಲ್ಲಿ ಎಂದರೆ ತುಳು ಚಳವಳಿಯ ಸಂದರ್ಭದಲ್ಲಿ ದೇರಂಬಳ ತ್ಯಾಂಪಣ್ಣ ಶೆಟ್ಟರು, ಅನಂತರಾಮ ಬಂಗಾಡಿ ಮೊದಲಾದವರು ಪ್ರಸಂಗ ರಚನೆ ಮಾಡಿದ್ದಾರೆ. ಅದರಲ್ಲೂ ಪದಂಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಪ್ರಸಂಗ ಬರೆದು ಒಂದು ಜಾನಪದವೂ ಐತಿಹಾಸಿಕವೂ ಎನಿಸುವ ಕತೆಯೊಂದನ್ನು ಪ್ರಸಂಗಕ್ಕೆ ಇಳಿಸಿದರು. ನಂತರ ಅಜ್ಜಿಕತೆಗಳೂ ಬಂದವು. ಆದರೆ ತುಳು ಪ್ರಸಂಗ ಪ್ರದರ್ಶನದಲ್ಲಿಯ ಒಂದು ಆರೋಪವೆಂದರೆ ಪ್ರೌಢತೆ ಕಾಣದ ಭಾಷೆ ಹಾಗೂ ಕೀಳು ಅಭಿರುಚಿಯ ಹಾಸ್ಯ. ಕಲ್ಲಾಡಿ ಕೊರಗಶೆಟ್ಟರು ತುಳು ಪ್ರದರ್ಶನಕ್ಕೆ ಕೈಹಾಕಿದವರು. ಅವರ ಟೆಂಟ್ ಮೇಳ (ಯಕ್ಷಗಾನ ನಾಟಕ ಸಭಾ) ಇದಕ್ಕೆ ಅವಕಾಶ ಕೊಟ್ಟಿತು. ಮುಂದೆ ಅಸಂಖ್ಯ ತುಳು ರಚನೆಗಳು ಬಂದವು. ಒಂದು ವರ್ಷ ಪ್ರಯೋಗ ಕಂಡ ಮೇಲೆ ಮುಂದಿನ ವರುಷಕ್ಕೆ ಮತ್ತೊಂದನ್ನು ಚಿಂತಿಸಬೇಕಾಗಿ ಬಂದದ್ದೇ ಇದರ ದುರಂತ. ಪುರಾಣ ಪ್ರಸಂಗಗಳಂತೆ ಶಾಶ್ವತವಾಗಿ ಜನರನ್ನು ಆಕಷರ್ಿಸುವುದು ಇವುಗಳಿಂದ ಅಸಾಧ್ಯವಾಯಿತು. ಇದಕ್ಕೆ ಭಾಷೆ, ಒಂದೇ ಕಾರಣವಾಗಲಿಲ್ಲ. ಅಗ್ಗದ ಪ್ರಚಾರಕ್ಕಾಗಿ ಬಳಸಿಕೊಂಡ ಕೃತ್ರಿಮ ಸನ್ನಿವೇಶಗಳು, ಸಿನಿಮಾ ನೃತ್ಯಗಳಿಂದಾಗಿಯೂ ಇವು ಸೊರಗಿದವು. ಆದರೂ ಕೆಲವು ಉತ್ತಮ ಸಾಹಿತ್ಯ ಗುಣವುಳ್ಳ ಪ್ರಸಂಗಳನ್ನು ಅಮೃತಸೋಮೇಶ್ವರ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಬಂಗಾಡಿಯವರು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಆದ್ದರಿಂದ ತುಳುತಿಟ್ಟು ಎಂಬೊಂದು ವಿಭಾಗ ಮಾಡಿದರೆ ಹೇಗೆ ಎಂಬ ವಿಚಾರವು ವಿಮರ್ಶಕರಲ್ಲಿ ಇದೆ. ಇದು ಅವಶ್ಯವಿಲ್ಲ. ಹಿಂದಿ, ಕೊಂಕಣಿ, ಕನ್ನಡದಲ್ಲಿ ಜಾನಪದ ರಂಗಭೂಮಿ ಇದ್ದಂತೆ ತುಳು ಭಾಷೆಗೆ ಸಮೃದ್ಧತೆಯನ್ನು ಕೂಡಿಸಿಕೊಳ್ಳುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ಕನ್ನಡವು ಸಂಸ್ಕೃತದಿಂದ ಎರವು ಪಡೆದಂತೆ ತುಳು ಕೂಡಾ ಈ ಕೆಲಸ ಮಾಡಬಹುದು.

1 comment:

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ